ಚಾಲ್ರ್ಸ್ (ಸ್ಪೇನಿನ ದೊರೆಗಳು)

ಚಾಲ್ರ್ಸ್ I : 1500-1558. 1516ರಲ್ಲಿ ಸ್ಪೇನಿನ ದೊರೆಯಾದ ಈತ 1519ರಿಂದ 1556ರವರೆಗೆ ಪವಿತ್ರ ರೋಮನ್ ಚಕ್ರವರ್ತಿಯೂ ಆಗಿ 5ನೆಯ ಚಾಲ್ರ್ಸ್ ಆದ. ಇವನನ್ನು ಕುರಿತ ವಿವರಗಳಿಗೆ -
(ನೋಡಿ- ಚಾಲ್ರ್ಸ್-(ಪವಿತ್ರ-ರೋಮನ್-ಚಕ್ರವರ್ತಿಗಳು))

ಚಾಲ್ರ್ಸ್ II : 1661-1700. ಸ್ಪ್ಯಾನಿಷ್ ಹ್ಯಾಪ್ಸ್‍ಬರ್ಗ್ ವಂಶದ ಕೊನೆಯ ದೊರೆ. ಸ್ಪೇನಿನ 4ನೆಯ ಫಿಲಿಪ್ ಮತ್ತು ಮೆರ್ಯಾ ಇವರ ಪುತ್ರ. ಮೆರ್ಯಾ ಆಸ್ಟ್ರಿಯದ ಸಾಮ್ರಾಟ ಮೂರನೆಯ ಫರ್ಡಿನೆಂಡನ ಮಗಳು. ಚಾಲ್ರ್ಸ್ ಬಾಲ್ಯದಿಂದಲೂ ದುರ್ಬಲ. ಇವನ ಅನಂತರ ಉತ್ತರಾಧಿಕಾರಿ ಯಾರಾಗಬೇಕೆಂಬ ಬಗ್ಗೆ ವಾದವಿವಾದ ನಡೆದು, ಹ್ಯಾಪ್ಸ್‍ಬರ್ಗರ ಹಕ್ಕಿನ ವಿರುದ್ಧ ಫ್ರಾನ್ಸಿನ 14ನೆಯ ಲೂಯಿಯ ಒತ್ತಡಕ್ಕೆ ಒಳಗಾಗಿ ಲೂಯಿಯ ಮೊಮ್ಮಗ ಫಿಲಿಪನಿಗೆ ಪಟ್ಟವಾಗಬೇಕೆಂದು ಚಾಲ್ರ್ಸ್ ಒಪ್ಪಿದ. ಇವನ ಮರಣಾನಂತರ ಸ್ಪ್ಯಾನಿಷ್ ಸಿಂಹಾಸನದ ಉತ್ತರಾಧಿಕಾರಕ್ಕಾಗಿ ಯುದ್ಧ ಮೊದಲಿಟ್ಟಿತು.

ಚಾಲ್ರ್ಸ್ III : 1716-1788. ಸ್ಪೇನಿನ 5ನೆಯ ಫಿಲಿಪನ ಮಗ. 1716ರಲ್ಲಿ ಹುಟ್ಟಿದ. ಈತ 1732ರಲ್ಲಿ ಇಟಲಿಯ ಪಾರ್ಮಾದ ಡ್ಯೂಕನಾಗಿಯೂ 1734ರಲ್ಲಿ ನೇಪಲ್ಸ್-ಸಿಸಿಲಿಗಳ ರಾಜನಾಗಿಯೂ ಆಳುತ್ತಿದ್ದ. 1759ರಲ್ಲಿ ತನ್ನ ಬಲಸೋದರ, ಸ್ಪೇನಿನ ದೊರೆ, 4ನೆಯ ಫರ್ಡಿನೆಂಡ್ ತೀರಿಕೊಂಡಾಗ ನೇಪಲ್ಸ್ ಪಟ್ಟವನ್ನು ತನ್ನ ಮಗ ಫರ್ಡಿನೆಂಡನಿಗೆ ಕೊಟ್ಟು ಸ್ಪೇನಿನ ಸಿಂಹಾಸನವನ್ನೇರಿದ. ಬೂರ್ಬೊ ಕುಟುಂಬದ ಬಗ್ಗೆ ಇವನಿಗೆ ಅಭಿಮಾನವಿತ್ತು. ಇದಕ್ಕಾಗಿ ಇವನು ಫ್ರಾನ್ಸಿನ ಪರವಾಗಿ ಇಂಗ್ಲೆಂಡಿನ ವಿರುದ್ಧ ಸ್ಪೇನನ್ನು ಸಪ್ತವಾರ್ಷಿಕ ಯುದ್ಧದಲ್ಲಿ ತೊಡಗಿಸಿ ದೇಶವನ್ನು ಕಷ್ಟನಷ್ಟಗಳಲ್ಲಿ ಸಿಲುಕಿಸಿದ. ಅಮೆರಿಕನ್ ಸ್ವಾತಂತ್ರ್ಯ ಯುದ್ಧದ ಕಾಲಕ್ಕೂ ಇವನು ಇಂಗ್ಲೆಂಡ್ ವಿರೋಧಿ ನೀತಿ ಅನುಸರಿಸಿದ. ಆದರೆ ಒಳ್ಳೆಯ ಒಳಾಡಳಿತದಿಂದಾಗಿ ಎನ್‍ಲೈಟನ್ಡ್ ದೊರೆಗಳಲ್ಲಿ ಒಬ್ಬನೆಂದು ಕೀರ್ತಿ ಪಡೆದ. ಕ್ಯಾತೊಲಿಕನಾದರೂ ಜೆಸುಯಿಟರನ್ನು ದೇಶದಿಂದ ಹೊರದೂಡಿ ಧಾರ್ಮಿಕ ವಿಚಾರಣೆಯನ್ನು ಸ್ಥಗಿತಗೊಳಿಸಿದ.

ಚಾಲ್ರ್ಸ್ IV : 1748-1814. 3ನೆಯ ಚಾಲ್ರ್ಸನ ಎರಡನೆಯ ಮಗ. 1748ರಲ್ಲಿ ಜನಿಸಿದ. ಅಣ್ಣ ದುರ್ಬಲನೂ ರೋಗಿಷ್ಠನೂ ಆಗಿದ್ದುದರಿಂದ ಇವನಿಗೆ ಪಟ್ಟವಾಯಿತು (1788). ರಾಣಿ ಮರಿಯಾ ಲುವಿಸಾ ತನ್ನ ಪ್ರಿಯಕರ ಗೊಡಾಯನ ನೆರವಿಂದ ರಾಜ್ಯಭಾರ ನಿರ್ವಹಿಸಿದಳು. ಫ್ರಾನ್ಸಿನ ಕ್ರಾಂತಿ ಯುದ್ಧಗಳಲ್ಲಿ ದೊರೆ ರಾಜಪಕ್ಷ ವಹಿಸಿದ. ಇದರಿಂದ ನೆಪೋಲಿಯನ್ ಸ್ಪೇನನ್ನು ವಶಪಡಿಸಿಕೊಂಡ. ಚಾಲ್ರ್ಸ್ 1808ರಲ್ಲಿ ಕಿರೀಟವನ್ನು ತ್ಯಜಿಸಿದ. ನೆಪೋಲಿಯನ್ ಈತನನ್ನು ಇವನ ಮಗನ ಜೊತೆಗೆ ಬಂಧಿಸಿ ಫ್ರಾನ್ಸಿಗೆ ಒಯ್ದ. ಈತ 1814ರಲ್ಲಿ ಬಿಡುಗಡೆಯಾಗಿ ರೋಮಿನಲ್ಲಿ ತೀರಿಕೊಂಡ. 1812ರಲ್ಲಿ ಇವನ ಮಗ 7ನೆಯ ಫರ್ಡಿನೆಂಡನಿಗೆ ಪಟ್ಟವಾಯಿತು.				(ಎಸ್.ಎನ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ